A review by harshithcs
ನನ್ನ ದೇವರು ಮತ್ತು ಇತರ ಕಥೆಗಳು by Kuvempu

4.0

ಅತ್ಯದ್ಭುತ!
ನಾನು ಇಷ್ಟು ಹಿತವಾದ ಕನ್ನಡವನ್ನು ಓದಿ ತುಂಬಾ ದಿನವಾಗಿತ್ತು. ಕುವೆಂಪುರವರು ನನಗೆ ಮತ್ತೊಮ್ಮೆ ಕನ್ನಡವನ್ನು ಸುಲಲಿತವಾಗಿ ಓದಿ, ಕೇಳುವ ಆನಂದ ತಂದುಕೊಟ್ಟರು.

ಪ್ರಕೃತಿಯ ಸೌಂದರ್ಯವನ್ನು ಕುವೆಂಪುರವರು ವರ್ಣಿಸುವಂತೆ ಜಗತ್ತಿನಲ್ಲಿ ಇನ್ಯಾರು ವರ್ಣಿಸಲು ಅಸಾಧ್ಯ. "ಔದಾರ್ಯ" ಕಥೆ ಓದುತ್ತಾ ದಿಗ್ಭ್ರಾಂತನಾಗಿ ಒಂದಿಷ್ಟು ಕಾಲ ಹಾಗೆ ಕುಳಿತುಬಿಟ್ಟೆ.

ಆಶ್ಚರ್ಯ ಎಂತನಿಸಿದ್ದು ಕುವೆಂಪುರವರ ಅದ್ಭುತವಾದ ಹಾಸ್ಯದ ಬರವಣಿಗೆ. " 'ಗಂಟು' ಅಥವಾ ಗುಪ್ತಧನ" ಹಾಗು "ಆದರ್ಶ ಸಾಧನೆ" ಕಥೆಗಳಲ್ಲಂತೂ, ಕೋಣೆಯಲ್ಲಿ ಒಬ್ಬನೆ ಕೂತು ಜೋರಾಗಿ ನಗುತ್ತಿದ್ದೆ. ಕುವೆಂಪುರವರ ವಿನಯವಾದ ಶೈಲಿಯಲ್ಲಿ, ವ್ಯಂಗ್ಯ-ವಿಡಂಬಣೆಯಿಂದ, ಚಾಣಾಕ್ಷತೆಯಿಂದ ಹಾಸ್ಯವನ್ನು ಓದಿ ತುಂಬಾ ಉಲ್ಲಾಸವಾಯಿತು.

ಆದರೆ ಕೆಲುವೊಮ್ಮೆ ಅನಿಸಿದ್ದು ಕುವೆಂಪುರವರ ಕಥೆ ಕಟ್ಟುವ ಕ್ರಮ ನನಗೆ ಹೊಂದದೆ ಇರುವುದು. ಅವರ ಆ ಮನೋಹರವಾದ, ಕಾವ್ಯಸ್ಪದದ ಸಾಲುಗಳ ಮಧ್ಯೆ, ಮೂಲ ಕಥೆ ಎಲ್ಲೋ ಕಳೆದುಹೋಯಿತೆಂದೆನಿಸಿತು.

ಕೊನೆಯದಾಗಿ, "ನನ್ನ ದೇವರು ಮತ್ತು ಇತರ ಕಥೆಗಳು" ನನ್ನ ಕನ್ನಡ ಪದಸಂಪತ್ತನ್ನು ಇನ್ನಷ್ಟು ವಿಸ್ತರಿಸಲು ನೆರವಾಯಿತು. ಎಷ್ಟೋ ಹಿತವಾದ ಮತ್ತು ಆಳವಾದ ಕನ್ನಡ ಪದಗಳನ್ನು ನನಗೆ ಕುವೆಂಪುರವರು ಪರಿಚಯಿಸಿದರು.